ಮೊಡಿಲ್ಯಾನೀ, ಫ್ರಾಂಕೊ 
1918 ಅರ್ಥಶಾಸ್ತ್ರಜ್ಞ. 1985ರ ಅರ್ಥಶಾಸ್ತ್ರ ನೊಬೆಲ್ ಬಹುಮಾನ ವಿಜೇತ. ಇಟಲಿಯ ರೋಮ್‍ನಲ್ಲಿ 1918ರಲ್ಲಿ ಜನನ. 1939ರಲ್ಲಿ ರೋಮ್ ವಿಶ್ವವಿದ್ಯಾಲಯದಿಂದ ನ್ಯಾಯಶಾಸ್ತ್ರದಲ್ಲಿ ಡಾಕ್ಟೋರೇಟ್ ಪದವಿ ಪಡೆದು 1940ರಲ್ಲಿ ನ್ಯೂಯಾರ್ಕಿನ ನ್ಯೂ ಸ್ಕೂಲ್ ಆಫ್ ಸೋಷಿಯಲ್ ಸೈನ್ಸ್ ರಿಸರ್ಚ್‍ನಲ್ಲಿ ಮತ್ತೊಂದು ಡಾಕ್ಟೋರೇಟ್ ಪದವಿ ಪಡೆದರು. ಅನೇಕ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿ ಅನಂತರ 1962 ರಿಂದ ಮೆಸಾಚುಸೆಟ್ಸ್ ಇನ್‍ಸ್ಟಿಟ್ಯೂಟ್‍ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಮೊಡಿಲ್ಯಾನೀ ಅನೇಕ ಸಂಶೋಧನ ಪ್ರಬಂಧಗಳನ್ನೂ ಗ್ರಂಥಗಳನ್ನೂ ಪ್ರಕಟಿಸಿದ್ದಾರೆ. ಇವರ ಮುಖ್ಯ ಕೃತಿಗಳೆಂದರೆ, ನ್ಯಾಷನಲ್ ಇನ್‍ಕಮ್ ಅಂಡ್ ಇಂಟರ್‍ನ್ಯಾಷನಲ್ ಟ್ರೇಡ್ (1953), ಪ್ಲಾನಿಂಗ್ ಪ್ರೊಡಕ್ಷನ್, ಇನ್‍ವೆಂಟರಿಸ್ ಅಂಡ್ ವರ್ಕ್‍ಪೋರ್ಸ್ (1960), ರೋಲ್ ಆಫ್ ಅಂಟಿಸಿಪೇಷನ್ಸ್ ಅಂಡ್ ಪ್ಲಾನ್ಸ್ ಇನ್ ಎಕನಾಮಿಕ್ ಬಹೇವವಿಯರ್ ಅಂಡ್ ದೇರ್ ಯೂಸ್ ಇನ್ ಎಕಾನಾಮಿಕ್ ಅನಾಲಿಸಿಸ್ ಅಂಡ್ ಪೋರ್‍ಕಾಸ್ಟಿಂಗ್ (1961), ನ್ಯೂಮಾರ್ಟ್ ಗೇಜ್ ಡಿಸಯನ್ಸ್ ಫಾರ್ ಸ್ಟೇಟ್ ಹೌಸಿಂಗ್ ಇನ್ ಆ್ಯನ್ ಇನ್‍ಫ್ಲೇಷನರಿ ಎನ್‍ವೈರ್ನಮೆಂಟ್ (1975) ಮತ್ತು ಮೂರು ಸಂಫುಟಗಳ ದಿ ಕಲೆಕ್ಟಡ್ ಪೇಪರ್ಸ ಆಫ್ ಫ್ರಾಂಕೋ ಮೆಡಿಲ್ಯಾನೀ (1980) ಮುಂತಾದವು.

ಮುಖ್ಯವಾಗಿ ಆದಾಯ, ಅನುಭೋಗಿ ಮತ್ತು ಉಳಿತಾಯ ಮೀಮಾಂಸೆಗಳಿಗೆ ಸಂಬಂಧಿಸಿದಂತೆ ಮೊಡಿಲ್ಯಾನಿ ಪ್ರೌಢಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇವರ ಪ್ರಕಾರ ವ್ಯಕ್ತಿಯ ಪ್ರಸ್ತುತದ ಅನುಭೋಗ ಮುಂದೆ ಅವನು ಸಂಪಾದಿಸಬಹುದಾದ ಆದಾಯ ಮತ್ತು ಆಸ್ತಿಯ ಮೇಲೆ ಆಧಾರಿತವಾಗುತ್ತದೆ. ಜೀವನಚಕ್ರ ಮೀಮಾಂಸೆ ಇವರ ಒಂದು ಮುಖ್ಯ ಮೀಮಾಸೆ, ಇದರ ಪ್ರಕಾರ ಅನುಭೋಗಿಗಳು ವಿಶ್ರಾಂತಿ ವೇತನ ಪಡೆದ ಬಳಿಕವೂ ತಾವು ದುಡಿಯುವಾಗಿದ್ದಷ್ಟೇ ಆದಾಯ ದೊರೆಯುವ ರೀತಿಯಲ್ಲಿ ಉಳಿತಾಯವನ್ನು ಮಾಡುತ್ತಾರೆ.

ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರದಲ್ಲಿ ಅನುಭೋಗ ಬಿಂಬಕ ಮತ್ತು ಇಟಲಿಯ ಅನುಭವ ಎನ್ನುವ ಸಂಶೋಧನೆ ಲೇಖನದಲ್ಲಿ ಜೀವನ ಚಕ್ರ ಮೀಮಾಂಸೆ ಸಾರ್ವತ್ರೀಕರಿಸುವ ಪ್ರಯತ್ನ ನಡೆಸಿದ್ದಾರೆ. ಸ್ವಾರೂಪಿಕ ನಿರುದ್ಯೋಗವಿರುವ ಅಭಿವೃದ್ದಿಶೀಲ ಅರ್ಥವ್ಯವಸ್ಥೆಯಲ್ಲಿ ಕೇವಲ ಪ್ರಸ್ತುತ ಆದಾಯವಷ್ಟೇ ಅಲ್ಲದೆ ಈಗಾಗಲೇ ಗಳಿಸಿರುವ ಆಸ್ತಿಯಿಂದ ಬರುವ ಆದಾಯ ಸಹ ಅನುಭೋಗದ ಮೇಲೆ ಹೇಗೆ ಪ್ರಭಾವಬೀರುತ್ತದೆ ಎಂಬುದನ್ನು ಚರ್ಚಿಸಿದ್ದಾರೆ.

ಬಂಡವಾಳ ಚಲನೆಗೆ ಸಂಬಂಧಿಸಿದಂತೆ ಹಣ, ಬಡ್ಡಿ, ಇವುಗಳಿಗೆ ಸಂಬಂಧಿಸಿದಂತೆ ಮತ್ತು ಕಂಪೆನಿಗಳು ಭವಿಷ್ಯದಲ್ಲಿ ಹೇಗೆ ಲಾಭಗಳಿಸುತ್ತವೆ ಎನ್ನುವುದರ ಆಧಾರದ ಮೇಲೆ ಅವುಗಳ ಷೇರುಗಳ ಮಾರುಕಟ್ಟೆ ಬೆಲೆ ನಿರ್ಧರಿತವಾಗುತ್ತದೆ ಹೊರತು ಅವುಗಳ ಆಸ್ತಿ ಮತ್ತು ಸಾಲಗಳ ಮೇಲಲ್ಲ ಎಂಬ ಇವರ ಸಿದ್ಧಾಂತ ಪ್ರಸಿದ್ದವಾಗಿದೆ. 1963 - 68ರ ಅವಧಿಯಲ್ಲಿ ಇವರು ರೂಪಿಸಿದ ಒಂದುಗಣೀತೋಕ್ತಿ ಮಾದರಿ ಅಮೆರಿಕ ಸಂಯುಕ್ತಸಂಸ್ಥಾನಕ್ಕೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಅದರ ರಾಷ್ಟ್ರೀಯ ವರಮಾನ, ಹಣದುಬ್ಬರ, ನಿರುದ್ಯೋಗ ಇವನ್ನು ಮುಂಗಾಣಲು ಬಲು ಉಪಯುಕ್ತವಾಗಿದೆ. ಅರ್ಥಶಾಸ್ತ್ರ ಈ ಬಗೆಯ ಇತರ ಮಹತ್ತರ ಕೊಡುಗೆಯನ್ನು ಗಮನಿಸಿ 1985ರ ನೋಬೆಲ್ ಪಾರಿತೋಷಕ ನೀಡಲಾಗಿದೆ.
(ಸಿ.ಕೆ.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ